ಸೋಲು ಶಾಶ್ವತವಲ್ಲ

ಎಲ್ಲ ಆರಂಭಕ್ಕೂ ಒಂದು ಅಂತ್ಯವಿರುತ್ತದೆ. ಪ್ರತಿಯೊಂದು ಅಂತ್ಯವೂ ಇನ್ನೊಂದು ಆರಂಭಕ್ಕೆ ದಾರಿಮಾಡಿಕೊಡುತ್ತದೆ.

ಹಗಲು ಹೋಗಿ ರಾತ್ರಿಯಾಗುವಂತೆ, ಕತ್ತಲು ಸರಿದು ಮತ್ತೆ ಬೆಳಕಾಗುವಂತೆ, ಜೀವನದ ಕಷ್ಟ ಸುಖಗಳೂ ಕೂಡ ಪರಸ್ಪರ ಸ್ಪರ್ಧೆಯಿಂದ ಬದಲಾಗುತ್ತವೆ.

ನಮ್ಮ ಬದುಕಿನಲ್ಲಿನ ಸುಖಕ್ಕಾಗಲೀ, ದುಃಖಕ್ಕಾಗಲೀ ದೃಢವಾದ ನೆಲೆಯಿಲ್ಲ. ಒಂದು ಮತ್ತೊಂದಕ್ಕೆ ಆಗಾಗ ಅವಕಾಶವನ್ನು ಕಲ್ಪಿಸಿಕೊಡುತ್ತಲೇ ಇರುತ್ತದೆ.

ಎಲ್ಲ ದಿನಗಳೂ ಒಂದೇ ರೀತಿ ಇರುವುದಿಲ್ಲ. ಕೆಲವೊಂದು ದಿನಗಳಿಗೋಸ್ಕರ ನಾವು ಕಾತರತೆಯಿಂದ ಕಾಯುತ್ತಿದ್ದರೆ, ಮತ್ತೆ ಕೆಲವು ದಿನಗಳು ನೀರಸವಾಗಿ ಕಳೆದು ಹೋಗುತ್ತವೆ. ಕೆಲವು ದಿನಗಳಂತೂ ನೆನಪಿಸಿಕೊಳ್ಳುವುದೇ ಬೇಡವೆನ್ನುವಷ್ಟು ಬೇಸರ ತರಿಸಿಬಿಟ್ಟಿರುತ್ತವೆ.

ಇಂದು ಗೆದ್ದೆವೆಂದು ಬೀಗಿದರೇನು? ದಿನ ಪತ್ರಿಕೆಯ ಮುಖಪುಟದಲ್ಲೇ ರಾರಾಜಿಸಿದರೇನು? ನಾಳೆಯ ಸಂಚಿಕೆ ಬರುವಾಗ ಇಂದಿನದ್ದು ಹಳೇ ಸುದ್ದಿಯಾಗಿ ಬಿಟ್ಟಿರುತ್ತದೆ. ಇಂದು ಖರೀದಿಸಿದ ಹೊಸಕಾರು, ಹೊಸಮನೆ ನಾಳೆಯಿಂದಲೇ ಹಳೆಯದಾಗಲು ಪ್ರಾರಂಭವಾಗುತ್ತದೆ.

ಇಂದಿನ ಪಂದ್ಯದಲ್ಲಿ ಗೆದ್ದವರ ಸಂಭ್ರಮ ಮುಂದಿನ ಪಂದ್ಯಕ್ಕೆ ದಿನ ನಿಗದಿಯಾದಾಗಲೇ ಅಂತ್ಯವಾಗಿಬಿಡುತ್ತದೆ. ಮತ್ತದೇ ಕುತೂಹಲ, ಮಹಾ ನಿರೀಕ್ಷೆ , ಭಯ , ಆತಂಕ ಆರಂಭವಾಗಿಬಿಡುತ್ತದೆ. ಗೆಲುವನ್ನು ಕಾಣುವ, ಹೊಸತನ್ನು ಬಯಸುವ ಹುರುಪೇನಿದ್ದರೂ ಅದು ಕೈ ಸೇರುವ ತನಕ ಮಾತ್ರ.

ಹೊಸ ಕಾರು, ಬಟ್ಟೆ, ಫೋನ್….. ಕೊಳ್ಳುವ ಮೊದಲು ಬಹಳ ನಿರೀಕ್ಷೆಯನ್ನು ಸೃಸ್ಟಿಸಿಬಿಡುತ್ತದೆ. ಮಾರುಕಟ್ಟೆಯಲ್ಲಿ ನಮಗೆ ಅದೊಂದೇ ಅದ್ಭುತವಾಗಿ ಗೋಚರಿಸುತ್ತದೆ. ಅಂಥದ್ದು ಇನ್ನೊಂದಿಲ್ಲವೇ ಇಲ್ಲ ಎಂಬಂತೆ ಭಾಸವಾಗುತ್ತದೆ. ಅಂತೆಯೇ ಕೈಸೇರಿದಾಗ ಅತೀವ ಸಂಭ್ರಮವೇನೋ ಆಗುತ್ತದೆ. ಆದರೆ ವಾಸ್ತವವಾಗಿ ಅದು ಅದರ ಅಂತ್ಯವಾಗಿರುತ್ತದೆ! ’ಅಸ್ತಪ್ರಾಯಾನಂದಂ ಕಥಂಚಿತ್ ನ ವಸತಿ ಸತತಂ….’

ಅಲ್ಪಕಾಲ ಅನುಭವಿಸಿದರ ಬಳಿಕ ಬಳಿಯಲ್ಲಿದ್ದುದರ ಬಗೆಗಿನ ಆಕರ್ಷಣೆ ಕ್ಷೀಣವಾಗಿಬಿಡುತ್ತದೆ. ಮನಸ್ಸು ಮತ್ತಿನ್ನೇನನ್ನೋ ಬಯಸುತ್ತದೆ.

ಹಾಗೆಯೇ ಬಾಳಿನಲ್ಲಿನ ಸೋಲು, ಹತಾಶೆಯೂ ಕೂಡ. ನೆಲಕ್ಕೊಗೆದ ಚೆಂಡಿನಂತೆ. ನೆಲದಲ್ಲೇ ನಿಲ್ಲುವುದಿಲ್ಲ. ಮತ್ತೆ ಪುಟಿದೇಳುತ್ತದೆ. ಇನ್ನಷ್ಟು ಹುರುಪಿನಿಂದ ಮತ್ತಷ್ಟು ಎತ್ತರಕ್ಕೆ ಖಚಿತವಾಗಿ ಹಾರುತ್ತದೆ !

’ ಪತಿತೋಽಪಿ ಕರಾಘಾತೈಃ ಉತ್ಸತ್ಯೇವ ಹಿ ಕಂದುಕಃ | ಪ್ರಾಯೇಣ ಸಾಧುವೃತ್ತಾನಾಂ ಅಸ್ಥಾಯಿನ್ಯಾ ವಿಪತ್ತಯಃ ’

ಇಂದು ಗೆದ್ದೆವೆಂದು ಹಿಗ್ಗಿದವರೂ ನಾಳೆಯೂ ಗೆಲ್ಲಲೇ ಬೇಕೆಂದಿಲ್ಲ. ಹಾಗೆಯೇ ಇಂದು ಸೋತವರ ಸೋಲೂ ಶಾಶ್ವತವಲ್ಲ.

ಎಂದೆಂದಿಗೂ ಕುಗ್ಗದವನ ಮುಂದೆ ಸೋಲೇ ಸೋಲುತ್ತದೆ. ಮಂಡಿಯೂರುತ್ತದೆ.

ಸೋಲನ್ನು ಲೆಕ್ಕಿಸದೆ ಮತ್ತೆ ಮತ್ತೆ ಯತ್ನಿಸುವನ ಮುಂದೆ ಸೋಲೇ ಗೆಲುವಿನ ಚಿಲುಮೆಯಾಗಿ ಬದಲಾಗುತ್ತದೆ.

~ ಶ್ರೀ ಯೋಗೀಂದ್ರ ಭಟ್, ಉಳಿ.
ಶ್ರೀ ಕೃಷ್ಣವೃಂದಾವನ, ನ್ಯೂಜೆರ್ಸಿ.