ಸಹಕಾರ

ಈ ಬದುಕಿನಲ್ಲಿ ನಾವೆಲ್ಲರೂ ಪರಸ್ಪರ ಪರಾವಲಂಬಿಗಳು.

ಪ್ರತಿಯೊಬ್ಬನ ಯಶಸ್ಸಿನ ಹಿನ್ನೆಲೆಯಲ್ಲೂ ಅದೆಷ್ಟೋ ಜನರ ಸಹಾಯ, ಸಹಕಾರಗಳಿರುತ್ತವೆ. ದೈವಾನುಕೂಲಗಳಿರುತ್ತವೆ.

ರುಚಿಕರವಾದ ಅಡುಗೆ ಮಾಡಿದವನನ್ನು ಅಸ್ವಾದಿಸಿದವರು ಮುಕ್ತಕಂಠದಿಂದ ಪ್ರಶಂಸಿಸಬಹುದು. ಆದರೆ ಪ್ರಶಂಸೆಗೆ ಕೇವಲ ಪಾಚಕನಷ್ಟೇ ಪಾತ್ರನಲ್ಲ. ವಾಸ್ತವವಾಗಿ ಆ ರುಚಿ ಪಾಚಕನ ಕೈಚಳಕಮಾತ್ರದಿಂದಷ್ಟೇ ಸೃಷ್ಟಿಯಾಗಲಿಲ್ಲ. ಎಷ್ಟೇ ಅನುಭವಸ್ಥನಾದರೂ ಒಳ್ಳೆಯ ಅಕ್ಕಿ, ಬೆಂಕಿ, ನೀರು ಸಿಗದೇ ಹೋದರೆ ಗುಣಮಟ್ಟದ ಅನ್ನ ಮಾಡುವುದು ಅಸಾಧ್ಯ.

ಉತ್ತಮ ಮಣ್ಣು ಸಿಗದೇಹೋದರೆ ಕುಂಬಾರನಿಗೆ ಒಳ್ಳೆಯ ಮಡಿಕೆ ಮಾಡಲು ಸಾಧ್ಯವಿಲ್ಲ. ಅದೃಷ್ಟ, ದೈವಾನುಕೂಲಗಳಿಲ್ಲದಿದ್ದರೆ ಕುಂಬಾರನಿಗೆ ಸಕಾಲದಲ್ಲಿ ಒಳ್ಳೆಯ ಮಣ್ಣೂ ಸಿಗುವುದಿಲ್ಲ!

ಅಸಹಾಯಃ ಸಮರ್ಥೋಽಪಿ ತೇಜಸ್ವೀ ಕಿಂ ಕರಿಷ್ಯತಿ |
ಅತೃಣೇ ಪತಿತೋ ವಹ್ನಿಃ ಸ್ವಯಮೇವೋಪಶಾಮ್ಯತೇ||

ಬೆಂಕಿ ಸ್ವತಃ ಎಷ್ಟು ಸಾಮರ್ಥ್ಯಶಾಲಿಯಾದರೇನು? ಉರಿಯಲು ಉರುವಲಂತೂ ಬೇಕೇ ಬೇಕು ತಾನೆ ?. ಬೆಟ್ಟವನ್ನೇ ಸುಡಬಲ್ಲ ಬೆಂಕಿಯೂ ನೀರಿಗೆ ಬಿದ್ದರೆ ಅಸಹಾಯಕವಾಗಿ ನಂದಿ ಹೋಗುತ್ತದೆ!

ತಂದೆ ಎಷ್ಟೇ ಸಾಮರ್ಥ್ಯದವನದರೂ ಮಗನಿಗೂ ಅದನ್ನು ಮುಂದುವರಿಸುವ ಯೋಗ್ಯತೆಯಿರಬೇಕು. ಇಲ್ಲವಾದರೆ ತಂದೆಯ ಪರಾಕ್ರಮದ ಪರಂಪರೆ ಮುಂದುವರಿಯುವುದು ಸಾಧ್ಯವಿಲ್ಲ. ಹೇಳಿಕೊಡುವ ಗುರುವು ಎಷ್ಟು ಚತುರನೋ, ಕಲಿಯುವ ಶಿಷ್ಯನೂ ಅಷ್ಟೇ ಯೋಗ್ಯ ಮತ್ತು ಛಲವುಳ್ಳವನಾಗಿರಬೇಕು. ಇಲ್ಲದಿದ್ದರೆ ಗುರುವಿನ ಗುಣಮಟ್ಟದ ವಿದ್ಯೆ ಅಲ್ಲಿಗೇ ನಿಂತುಬಿಡುತ್ತದೆ. ಶಿಷ್ಯಪರಂಪರೆಯಲ್ಲಿ ಮುಂದುವರಿಯುವುದಿಲ್ಲ.

ಒಳ್ಳೆಯ ಮಕ್ಕಳನ್ನು ಒಳ್ಳೆಯ ಹೆಸರುಳ್ಳ ಶಾಲೆಗೆ ಸೇರಿಸಿದರೆ ಮಾತ್ರ ಸಾಲದು. ತನ್ನ ಹೆಸರನ್ನು ಉಳಿಸಿಕೊಳ್ಳಬೇಕಾದರೆ ಶಾಲೆಯೂ ಮಕ್ಕಳಿಂದ ಒಳ್ಳೆಯ ಸಾಧನೆಗಳನ್ನು ಮಾಡಿಸಬೇಕಾಗುತ್ತದೆ. ಹಾಗಾಗಿ, ಹೆಸರುವಾಸಿಯಾದ ಶಾಲೆಗೆ ಸೇರಿಕೊಳ್ಳುವ ಸಾಧನೆಗಿಂತಲೂ ತಾನೆ ಸೇರಿದ ಶಾಲೆಗೆ ಹೆಸರು ತರುವುದು ವಿದ್ಯಾರ್ಥಿಯ ನಿಜವಾದ ಸಾಧನೆ ಎನ್ನಿಸಿಕೊಳ್ಳುತ್ತದೆ.

ತನ್ನ ಸಾಧನೆಯನ್ನು ಕಂಡು ಲೋಕವೆಲ್ಲಾ ಗೌರವಿಸುತ್ತದೆ ಎಂದು ಸಾಧಕನೆಂದಿಗೂ ಗರ್ವಪಟ್ಟುಕೊಳ್ಳಬಾರದು. ಗೌರವಕ್ಕೆ ಕಾರಣ ಕೇವಲ ಪ್ರತಿಭೆಯಲ್ಲ. ಕೇವಲ ಪರಿಶ್ರಮವೂ ಅಲ್ಲ. ಅದೆಷ್ಟೋ ಮಂದಿಯ ಸಹಕಾರದ ಜೊತೆಗೆ ಸಿಕ್ಕಿದ ಅವಕಾಶ.

ಲೋಕದಲ್ಲಿ ನಮ್ಮನ್ನು ಮೀರಿಸುವ ಅದೆಷ್ಟೋ ಪ್ರತಿಭೆಗಳಿರಬಹುದು. ಅವಕಾಶ ವಂಚಿತರಾಗಿರಬಹುದು. ಆದ್ದರಿಂದ ನಮಗೆ ಸಿಕ್ಕಿದ ಮನ್ನಣೆ, ಗೌರವಕ್ಕೆ ನಾವು ಸದಾ ಕೃತಜ್ಞರಾಗಿರಬೇಕು. ಅದು ತಮ್ಮದಲ್ಲ ಮತ್ತು ಶಾಶ್ವತವಲ್ಲ ಎಂಬ ವಾಸ್ತವಸತ್ಯದ ಅರಿವಿರಬೇಕು.

ನಮ್ಮ ಸುತ್ತಲೂ ನೋಡಿದರೆ, ಅದೆಷ್ಟೋ ಯೋಗ್ಯರು ಉತ್ತಮ ವಿದ್ಯೆಯಿದ್ದರೂ ಉತ್ತಮ ಉದ್ಯೋಗದಿಂದ ವಂಚಿತರಾಗಿದ್ದಾರೆ. ಅದೆಷ್ಟೋ ಉತ್ತಮ ಕಲಾವಿದರು ಅವಕಾಶವಂಚಿತರಾಗಿದ್ದಾರೆ. ಆದ್ದರಿಂದ ಇಲ್ಲಿ ಯಾರೂ ಸರ್ವಶ್ರೇಷ್ಠರಿಲ್ಲ. ಗುರುತಿಸಿ ಗೌರವಿಸುವಂತೆ ಮಾಡಿದ್ದು ಅದೆಷ್ಟೋ ಜನರ ಸಹಕಾರ ಮತ್ತು ದೇವರ ಇಚ್ಛೆ ಎಂಬುವುದನ್ನೆಂದಿಗೂ ಮರೆಯಬಾರದು.

ಶ್ರೀ ಯೋಗೀಂದ್ರ ಭಟ್, ಉಳಿ
ಶ್ರೀ ಕೃಷ್ಣವೃಂದಾವನ, ನ್ಯೂಜೆರ್ಸಿ.