ಮನವು ಚಂಚಲವಂತೆ ಮನುಜ
ಮನ ಗೆಲ್ಲಲಾಗುವುದೆ ಸುಲಭ ಸಹಜ? ||ಪ||
ಮುನಿ ವಿಶ್ವಾಮಿತ್ರರು ಬಲದಿ
ಮನವ ನಿಗ್ರಹಿಸಿ ಮುಳುಗಿರೆ ತಪದಿ
ಮಾನಿನಿ ಮೇನಕೆ ಇಂಪು ಸ್ವರದಿ
ಮುನಿಯ ತಪೋಭಂಗ ಮನದ ಚಂಚಲದಿ |೧|
ಧರ್ಮಜನಾದೇಶ ಬಲದಿ
ಕರ್ಮ ಬಂಧನವ ಕಳಚುತ ಛಲದಿ
ಅರ್ಜುನನ ಸನ್ಯಾಸ ಕ್ಷಣಿಕ
ಸುಭದ್ರೆಯು ಕಣ್ಮುಂದೆ ಬರುವನಕ |೨|
ಆರು ವೈರಿಗಳಿರೆ ಮನದಿ
ಏರುತಲಿಹ ಸುಖ ವ್ಯಾಮೋಹ ಮದದಿ
ಮೀರಿ ಮನವ ಗೆದ್ದೆ ಎನುವ
ಶೂರನ ಮನದ ನಿಗ್ರಹ ಕ್ಷಣಿಕವು |೩|
‘ನಾನು’ ದೇಹವೆಂದು ಮರೆತು
ನನ್ನೊಳಗಿನ ಪರಮಾತ್ಮನ ಅರಿತು
ಮನದ ನಿಗ್ರಹ ಮಾಡಲರಿತು
ಮನುಜಗೆ ಸಾಧ್ಯ ಸಾಧನೆ ಒಂದಿನಿತು |೪|
ಅರಿವಾತ್ಮದೊಳಗರಳುತಲಿ
ಹಿರಿದಾದ ಪರಶಕ್ತಿಯಲಿ ಮನವಿರಲು
ತರಿದು ಮನದ ಚಂಚಲತೆಯ
ಗುರಿಯರಿಯುತ ಸಾಧ್ಯ ಮನವ ಗೆಲ್ಲುವುದು|೫|
– ಎ. ಕೇಶವರಾಜ್ 🙏
. April 5 202