ಗೆಳೆತನ

ಮನುಷ್ಯನೆಂದಿಗೂ ಸಂಘಜೀವಿ. ಏಕಾಕಿಯಾಗಿಯಾಗಿ ಬದುಕುವುದು ಬಹುಶಃ ಸಾಧ್ಯವೇ ಇಲ್ಲ. ಯಾರೊಂದಿಗಾದರೂ ಮಾತುಕತೆ, ಒಡನಾಟ ಇರಲೇ ಬೇಕಾಗುತ್ತದೆ. ಎಲ್ಲವನ್ನು ತೊರೆದ ಸನ್ನ್ಯಾಸಿಗಳಿಗೂ ಗುರುಗಳದ್ದೋ, ಶಿಷ್ಯರದ್ದೋ, ನಂಬಿಕಸ್ಥರ ಸಾಂಗತ್ಯವಂತೂ ಇದ್ದೇ ಇರುತ್ತದೆ.

ಅಂತರಂಗದ ಭಾವನೆಗಳನ್ನು ಬಚ್ಚಿಡಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಮನುಜನ ಮನಸ್ಸಿಗಂತೂ ಮುಚ್ಚಳವೇ ಇಲ್ಲವೆನ್ನಬಹುದು. ಸಂತಸವನ್ನಾಗಲೀ, ಬೇಸರವನ್ನಾಗಲೀ, ಯಾರ ಬಳಿಯಾದರೂ ಹಂಚಿಕೊಂಡಾಗಲೇ ಸಮಾಧಾನ. ಪ್ರಾಯಶಃ ಈ ವಿಷಯದಲ್ಲಂತೂ ಎಲ್ಲರ ಮನಸ್ಸಿನ ಸ್ವಭಾವವೂ ಒಂದೇ . ಶಾಲೆಯಿಂದೋಡಿಬಂದು ನಡೆದುದೆಲ್ಲವನ್ನೂ ಒಂದೇ ಉಸಿರಿಸಿನಲ್ಲಿ ಅಮ್ಮನ ಬಳಿ ಹೇಳಿ ನಿರುಮ್ಮಳವಾಗುವ ಮುಗ್ಧ ಮಗುವಿನಂತೆ.

ಮನದೊಳಗಿನ ಸಂತಸವನ್ನು ಹಂಚಿಕೊಳ್ಳಲು, ಒಡಲಿನಾಳದ ವೇದನೆಗಳನ್ನು ಹೊರಹಾಕಲು, ಗೊಂದಲಗಳನ್ನು ಬಗೆಹರಿಸಿಕೊಳ್ಳಲು, ಮತ್ತು ಮುಕ್ತವಾಗಿ ಮಾತನಾಡಲು ನಮ್ಮೊಡನೆ ನಂಬಿಕೆಯ ಜನರಿರಬೇಕು. ಬಂಧುಗಳು, ಮಿತ್ರರಿರಬೇಕು. ನಮ್ಮವರೆನಿಸಿಕೊಳ್ಳುವವರು, ನಂಬಿಕಸ್ಥರು ಸದಾ ನಮ್ಮ ಜೊತೆಗಿರಬೇಕು.

ಅವರು ಒಳ್ಳೆಯವರಾಗಿರಬೇಕು. ಏಕೆಂದರೆ, ನಮ್ಮೊಡನಾಡಿಗಳ ನಡೆನುಡಿಗಳ ಪ್ರಭಾವ ನಮ್ಮ ಮೇಲೂ ಪರಿಣಾಮ ಬೀರುತ್ತದೆ. ಸಹಜ ಸ್ವಭಾವವೂ ಸುತ್ತಲಿನವರ ಪ್ರಭಾವದ ಪ್ರಖರತೆಗೆ ಮಂಕಾಗುತ್ತದೆ. ಅಥವಾ ಮತ್ತಷ್ಟು ಸ್ಫುಟಗೊಳ್ಳುತ್ತದೆ. ಕೆಟ್ಟವರ ಒಡನಾಟವಿರುವವರು ದುಶ್ಚಟಗಳಿಗೆ ದಾಸರಾಗುವುದು ಖಂಡಿತ. ಸಜ್ಜನರ ಸಹವಾಸದಿಂದ ಸದ್ಗುಣಗಳ ವಿಕಾಸವಾಗುವುದೂ ನಿಶ್ಚಿತ. ಮಣ್ಣಿನ ಕೊಳೆಯನ್ನು ಮೆತ್ತಿಸಿಕೊಂಡರೆ ಮಾಣಿಕ್ಯವೂ ಕಳೆಗುಂದುತ್ತದೆ. ಹೂವಿನ ಸಹವಾಸದಿಂದ ನಾರೂ ದೇವರಿಗೆ ಹಾರವಾಗುತ್ತದೆ. ’ಸತ್ಸಂಗತಿಃ ಕಥಯ ಕಿಂ ನ ಕರೋತಿ ಪುಂಸಾಂ”

ಜಗತ್ತಿಗೇ ’ಮಿತ್ರ’ ಸೂರ್ಯನಂತೆ! ಯಾಕೆ ಗೊತ್ತಾ? ನಾವೇಳಲಿ ಬಿಡಲಿ. ಕರೆಯಲಿ ಕರೆಯದಿರಲಿ. ಅನುದಿನವೂ ನಮ್ಮ ಮುಂದೆ ಅವನಂತೂ ಪ್ರತ್ಯಕ್ಷ! ಎಂದೆಂದಿಗೂ ಸಮಯಕ್ಕೆ ಸರಿಯಾಗಿ ಅವನ ಹಾಜರಾತಿ. ಸರ್ವದಾ ಪರೋಪಕಾರನಿರತನಾದ ದಿನಕರನಿಗೆ ಒಂದಿನಿತೂ ಔದಾಸೀನ್ಯವಿಲ್ಲ. ಯಾರು ಗಮನಿಸದಿದ್ದರೂ ಬೇಸರವಿಲ್ಲ. ಗುರುತಿಸಿ ಗೌರವಿಸಬೇಕೆನ್ನುವ ಆಗ್ರಹವಿಲ್ಲ. ನನ್ನಿಂದ ತಾನೇ ಇವರೆಲ್ಲರ ದಿನ ? ನಾನಿಲ್ಲದಿದ್ದರೆ ಇವರಿಗೆಲ್ಲಿಯ ಜೀವನ ? ನಾ ಬರದಿದ್ದರೆ ಇವರೇನು ಮಾಡುತ್ತಾರೆ ನೋಡೋಣ, ಎಂದು ಅಜ್ಜಿ ಸಾಕಿದ ಕೋಳಿಯಂತೆ ದರ್ಪದಿಂದ ಒಂದು ದಿನ ರಜೆ ಹಾಕಿ ಕುಳಿತವನಲ್ಲ!

ಎಲ್ಲರಿಗೂ ಅವನು ಬೇಕು. ಅವನಿಗೆ ಯಾರಿಂದಲೂ ಏನೂ ಬೇಕಾಗಿಲ್ಲ. ಆದರೂ, ಬರುವಾಗ ಅವನ ಅಬ್ಬರವಿಲ್ಲ. ಹೋಗುವಾಗಲೂ ಸದ್ದಿಲ್ಲ. ಪ್ರತಿದಿನವೂ ಶಾಂತನಾಗಿಯೇ ಬರುವ ಶಾಂತನಾಗಿಯೇ ಹಿಂತಿರುಗುವ ಸೂರ್ಯನಿಗೆ ಸರಿಸಾಟಿಯಾದ ಮಿತ್ರ ಇಲ್ಲಿ ನಮಗಿನ್ನೊಬ್ಬನಿಲ್ಲ. ಮಾಡಿದ ಕಾರ್ಯ ಪುಟ್ಟದಾದರೂ, ಬೆಟ್ಟದಷ್ಟು ಬೀಗುವ ನಮ್ಮಂತಹ ಕ್ಷುಲ್ಲಕ ಬುದ್ಧಿ ಅವನದ್ದಲ್ಲ. ಅದಕ್ಕೇ ಇರಬೇಕು, ನಮ್ಮ ಬುದ್ಧಿಯನ್ನು ಸದಾ ಸನ್ಮಾರ್ಗದಲ್ಲಿರಿಸೆಂದು ಸಂಧ್ಯಾಕಾಲದಲ್ಲಿ ಅವನನ್ನೇ ಬೇಡುವುದು. ” ಧಿಯೋ ಯೋ ನಃ ಪ್ರಚೋದಯಾತ್”

ಸನ್ಮಿತ್ರನೆಂದರೆ ’ಸೂರ್ಯ’ ನಂಥವನು. ಒಳ್ಳೆಯ ಗುಣಗಳಿಗೆ ಬೆಳಕು ಚೆಲ್ಲುವವನು. ಸದ್ಬುದ್ಧಿಗೆ ಪ್ರಚೋದಕನು. ತಪ್ಪೆಸಗದಂತೆ ತಡೆಯುವವನು. ದೌರ್ಬಲ್ಯಗಳನ್ನು ಮರೆಮಾಚಿ, ಒಳ್ಳೆಯತನವನ್ನು ಹೊರಗೆಡಹುವವನು. ಕಷ್ಟಕಾಲದಲ್ಲೂ ಕೈಬಿಡದವನು. ಅಗತ್ಯಕ್ಕೆ ನೆರವಾಗುವವನು.

ಪಾಪಾನ್ನಿವಾರಯತಿ ಯೋಜಯತೇ ಹಿತಾಯ ಗುಹ್ಯಾನಿ ಗೂಹತಿ ಗುಣಾನ್ ಪ್ರಕಟೀಕರೋತಿ |
ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ ಸನ್ಮಿತ್ರಲಕ್ಷಣಮಿದಂ ಹಿ ಪ್ರವದಂತಿ ಸಂತಃ ||

ಒಳ್ಳೆಯ ಗೆಳೆಯರೆಂದರೆ ವೈದ್ಯರಂತೆ. ಕಹಿ ಗುಳಿಗೆಗಳನ್ನು ಕೊಟ್ಟಾದರೂ ಖಾಯಿಲೆ ವಾಸಿಮಾಡಬೇಕು. ಸೂಜಿಯಿಂದ ಚುಚ್ಚಿಯಾದರೂ ಒಳಸೇರಿರುವ ಮುಳ್ಳನ್ನು ಹೊರಗೆಳೆಯಬೇಕು. ಆ ಕ್ಷಣಕ್ಕೆ ನೋವುಮಾಡಿದಂತೆ ಕಂಡರೂ ಪರಿಹಾರ ಮಾತ್ರ ಶಾಶ್ವತ. ಒತ್ತಾಯದಿಂದ ಸಿಹಿಯನ್ನು ತಿನ್ನಿಸಿದರೆ ನಾಲಿಗೆಗೆ ಕ್ಷಣಿಕ ಸುಖ. ದೇಹಕ್ಕಾಗುವ ಹಾನಿ ಮಾತ್ರ ದೀರ್ಘಕಾಲಿಕ.

ಪ್ರಾಯಶಃ ಗೆಳೆತನವೆನ್ನುವುದೂ ವಿಷಯಾಧಾರಿತ. ’ಸಮಾನ-ಶೀಲ-ವ್ಯಸನೇಷು ಸಖ್ಯಂ’ ಎಂಬಂತೆ ಅವರವರ ಸ್ವಭಾವಕ್ಕನುಗುಣವಾಗಿ ಇಷ್ಟಪಡುವ ವಿಚಾರ, ವಿಹಾರಗಳಲ್ಲಿ ಸಮಾನಮನಸ್ಕರು ಜೊತೆಯಾಗುತ್ತಾರೆ. ಬಹಳಷ್ಟು ಗೆಳೆತನ ಸಭೆ, ಸಮಾರಂಭ, ಹರಟೆ, ಮಾತುಕತೆಗಳಿಗಷ್ಟೇ ಸೀಮಿತವಾಗಿರುತ್ತದೆ. ಕಾಲದ ಪರಿಮಿತಿಗೆ ಒಳಗಾಗಿರುತ್ತದೆ. ವೈಯ್ಯಕ್ತಿಕ ಬದುಕು ಬವಣೆಗಳ ಮಧ್ಯೆ ಸಮಯ, ಅವಕಾಶ ಸಿಕ್ಕಿದರಷ್ಟೇ ಭೇಟಿ, ಔಪಚಾರಿಕ ಮಾತುಕತೆಗಳು.

ನಮಗೆ ಅತ್ಯಂತ ಆತ್ಮೀಯರೆಂದರೆ ನಮ್ಮ ಜೊತೆಗೆ ಬದುಕು ಹಂಚಿಕೊಂಡವರು. ತಂದೆ ತಾಯಿಗಳು. ಹೆಂಡತಿ ಮಕ್ಕಳು. ನಮಗೇನು ಇಷ್ಟ ಎನ್ನುವುದಕ್ಕಿಂತಲೂ ನಮಗೆ ಯಾವುದು ಹಿತ ಎಂಬುದನ್ನು ಅರಿತವರು. ಒಟ್ಟಿಗಿದ್ದವರಿಗೆ ಅರ್ಥೈಸಿಕೊಳ್ಳುವ ಅವಕಾಶ ಅಧಿಕವಾಗಿರುತ್ತದೆ. ಅವರನ್ನು ನಾವೂ ಅರಿತುಕೊಂಡರೆ ಆಪ್ತತೆ ಮತ್ತಷ್ಟು ಆಪ್ಯಾಯಮಾನವಾಗಿರುತ್ತದೆ.

ಸಂಪತ್ತು, ಅಧಿಕಾರ ಇದ್ದವರ ಸುತ್ತ ಮಿತ್ರರು ಅಧಿಕ ಸಂಖ್ಯೆಯಲ್ಲಿರುತ್ತಾರೆ. ಉಪಗ್ರಹಗಳಂತೆ ಸುತ್ತುತ್ತಿರುತ್ತಾರೆ. ಅತ್ಯಂತ ಆತ್ಮೀಯರಂತೆ ವರ್ತಿಸುತ್ತಾರೆ. ಸುಮ್ಮಸುಮ್ಮನೆ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಯಾವಾಗಲೂ ಮಾತನಾಡಿಸುತ್ತಾರೆ. ಅವರ ಸಮಾನರನ್ನೋ, ಉತ್ತಮರನ್ನೋ ಕ್ಷುಲ್ಲಕ ಕಾರಣಗಳಿಗೆ ದೂರುತ್ತಾರೆ. ಹೇಗಾದರೂ ಮಾಡಿ ಗಮನ ಸೆಳೆಯಲು ಯತ್ನಿಸುತ್ತಾರೆ. ವಸ್ತುತಃ ಇವರೆಲ್ಲ ಸ್ವಂತ ಲಾಭಸ್ಕೋಸ್ಕರ ಪ್ರಭಾವಿಗಳನ್ನು ಬಳಸಿಕೊಳ್ಳುತ್ತಾರಷ್ಟೆ. ಕೇವಲ ಗುಣಗ್ರಾಹಿಗಳಾಗಿದ್ದರೆ ಏನೂ ಇಲ್ಲದವರ, ಬಡವರ ಹಿಂದೇಕೆ ಇವರು ಕಾಣಿಸಿಕೊಳ್ಳುವುದಿಲ್ಲ ? ಸ್ವಾರ್ಥಸಾಧನೆ ಬಿಟ್ಟರೆ ಇನ್ಯಾವ ಅಪ್ತತೆಯೂ ಅಲ್ಲಿರುವುದಿಲ್ಲ. ಹಣ, ಅಧಿಕಾರ ದೂರವಾದಾಗ ಇವರೂ ಅದೃಶ್ಯರಾಗಿ ಬಿಡುತ್ತಾರೆ.

ಸಂಗಡಿಗನ ಸಾಧನೆಗೆ, ಯಶಸ್ಸಿಗೆ ಸನ್ಮಿತ್ರನೆಂದಿಗೂ ಅಸೂಯೆ ಪಡುವುದಿಲ್ಲ. ಯೋಗ್ಯತೆಗೆ, ಪರಿಶ್ರಮಕ್ಕೆ ಅನುಗುಣವಾಗಿ ಸಿಗುವ ಗೌರವವನ್ನು ಗುರುತಿಸಿ ಸಂತಸಪಡುತ್ತಾನೆ. ಗೆಳೆಯನ ಯಶಸ್ಸು, ಗೌರವದಲ್ಲಿ ಪಾಲು ಕೇಳುವುದಿಲ್ಲ. ಸಾಧಕನ ಮಿತ್ರ ಅಥವಾ ಸಮಕಾಲೀನ ಎನ್ನುವುದು ಗೌರವ ಹಂಚಿಕೊಳ್ಳುವ ಅರ್ಹತೆಯಾಗುವುದಿಲ್ಲ. ಶ್ರಮಪಟ್ಟು ಓದಿ ಪದವಿ ಪಡೆದವನ ಜೊತೆಯವ ನಾನವನ ಮಿತ್ರ ನನಗೂ ಇರಲಿ ಪ್ರಮಾಣಪತ್ರ ಎನ್ನುವುದನ್ನು ಒಪ್ಪಲಾಗುವುದಿಲ್ಲ.

ವಾಸ್ತವವಾಗಿ ಪ್ರತಿಯೊಬ್ಬನಿಗೂ ಆತ್ಯಂತ ಆಪ್ತನೆಂದರೆ ತಾನು ಮಾತ್ರ. ಯಾರ ಜೊತೆಗೂ ಹಂಚಿಕೊಳ್ಳಲಾರದ ಗುಟ್ಟು, ಅನುಭವ ಮತ್ತು ಅಭಿಪ್ರಾಯಗಳು ನಮ್ಮ ಮನಸ್ಸಿನಾಳದಲ್ಲಿ ಅದೆಷ್ಟೋ ಇರುತ್ತವೆ. ಗೆಳೆತನವೆಂದರೆ ನಂಬಿಕೆ. ನೂರಕ್ಕೆ ನೂರು ನಂಬುವುದು ನಾವು ನಮ್ಮನ್ನು ಮಾತ್ರ. ಅದು ನಮ್ಮ ಖಾಸಗಿತನ.

ಮಿತ್ರನು ಎಷ್ಟೇ ಹತ್ತಿರದವರಾದರೂ ಎಲ್ಲವನ್ನೂ ಹೇಳಿಕೊಳ್ಳುವಂತಿಲ್ಲ. ಎಂತಹ ಆತ್ಮೀಯನ ನಡುವೆಯೂ ನಯವಾದ ಒಂದು ಅಂತರವಿರಬೇಕು. ಕಾಲದ ಜೊತೆಗೇ ಅಭಿಪ್ರಾಯಗಳೂ ಬದಲಾಗುತ್ತವೆ. ಸಂಬಂಧ ಇಂದು ಇದ್ದಂತೆಯೇ ನಾಳೆಗಿರದು. ಆದ್ದರಿಂದ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಯಾವ ನಂಬಿಕೆಯೂ ಮಿತಿಯನ್ನು ಮೀರಬಾರದು.

ನಾವು ಯಾವತ್ತಿಗೂ ನಿಃಸಂದೇಹವಾಗಿ ನಂಬಬಹುದಾದ ಪರಮಮಿತ್ರ, ಪರಮಾಪ್ತನೆಂದರೆ ಪರಮಾತ್ಮನೊಬ್ಬನೇ.

~ ಶ್ರೀ ಯೋಗೀಂದ್ರ ಭಟ್, ಉಳಿ.
ಶ್ರೀ ಕೃಷ್ಣವೃಂದಾವನ, ನ್ಯೂಜೆರ್ಸಿ