ಬೋಧಕರೇ ಎಲ್ಲ

ಬೋಧಕರೇ ಎಲ್ಲ
ಜಗದಲಿ ಬೋಧಕರೇ ಎಲ್ಲ
ಬೋಧಿಸುತಲಿ ಸಲಹೆಗಳನೀಯುತ
ಸಾಧುಗಳಂತೆ ನಟಿಸುವರೆಲ್ಲ! ||ಪ||

ಧರ್ಮವನರಿತಿಲ್ಲ
ಮನುಜರು ಮರ್ಮವನರಿತಿಲ್ಲ
ಧರ್ಮದ ಮರ್ಮವನರಿಯದೆ ಮನುಜರು
ಕರ್ಮವ ಮಾಡುತಲೆಡವುವರೆಲ್ಲ! |೧|

ಸತ್ಯ ನುಡಿಯುತಿಲ್ಲ
ಮನುಜರು ಮಿಥ್ಯ ನುಡಿವರೆಲ್ಲ
ಸತ್ಯ ನುಡಿಯಬೇಕೆಂದು ಬೋಧಿಸುತ
ಮಿಥ್ಯವ ಜಗದಲಿ ನುಡಿಯುವರೆಲ್ಲ!|೨|

ನ್ಯಾಯವನರಿತಿಲ್ಲ
ನರರನ್ಯಾಯಕೆ ಕೊನೆ ಇಲ್ಲ
ನ್ಯಾಯದಲಿರಬೇಕೆಂದು ಬೋಧಿಸುತ
ಅನ್ಯಾಯ ಬಲೆಯಲಿ ಸಿಲುಕಿಹರೆಲ್ಲ |೩|

ಜ್ಞಾನವಂತರಿಲ್ಲ
ಜಗದಲಿ ವಿದ್ಯಾವಂತರೆಲ್ಲ
ಜ್ಞಾನವನರಿಯದ ವಿದ್ಯಾವಂತರು
ಜ್ಞಾನಿಗಳಂತೆ ನಟಿಸುವರೆಲ್ಲ |೪|

ಸಾಧಕರಾಗೋಣ
ಜಗದಲಿ ಸಾಧಕರಾಗೋಣ
ಧರ್ಮ ಸತ್ಯ ನ್ಯಾಯದ ಜ್ಞಾನದಲಿ
ಸಾಧಿಸಿ ಬೋಧನೆಯನು ಮಾಡೋಣ |೫|

– ಎ. ಕೇಶವರಾಜ್ 🙏
April 4 2021