ಅನುಕರಣೆ
ಲೋಕದಲ್ಲಿಂದು ಅಂಧಾನುಕರಣೆಯೇ ಅತಿಯಾಗಿ ಕಾಣಿಸಿಕೊಳ್ಳುತ್ತಿದೆ. ಬಹಳ ಕಡೆಗಳಲ್ಲಿ ನಮ್ಮ ಭಾಷೆ, ಮಾತುಕತೆ, ಉಡುಗೆ ತೊಡುಗೆ, ಜೀವನ ಶೈಲಿ ಇತ್ಯಾದಿಗಳಲ್ಲಿನ ಅನನ್ಯತೆ ತನ್ನತನವನ್ನು ಕಳೆದುಕೊಂಡು ಬಿಟ್ಟಿದೆ.
’ಗತಾನುಗತಿಕೋ ಲೋಕಃ ನ ಲೋಕಃ ಪಾರಮಾರ್ಥಿಕಃ’
ಯಾರ್ಯಾರನ್ನೋ ಮೆಚ್ಚಿಸಲು ಹೊರಟು ಏನೇನನ್ನೋ ಕಳೆದುಕೊಳ್ಳುತ್ತಿದ್ದೇವೆ. ಆಧುನಿಕತೆಯ ಸೋಗಿನಲ್ಲಿ ನಮ್ಮ ಬದುಕಿನೊಳಗೂ ಅನಗತ್ಯ ಅಭ್ಯಾಗತರ ಆಗಮನವಾಗಿಬಿಟ್ಟಿದೆ. ನಮಗರಿವಿಲ್ಲದಂತೆಯೇ ನಮ್ಮೊಳಗಿನ ಸಾಂಸ್ಕೃತಿಕ ಸ್ವಂತಿಕೆಯ, ಸಿರಿವಂತಿಕೆಯ ಅವಸಾನವಾಗುತ್ತಿದೆ.
ನಮ್ಮದಲ್ಲದ ಅದೆಷ್ಟೋ ಆಚರಣೆಗಳು ನಮ್ಮ ಬಾಳಿನೊಳಗೂ ನುಸುಳಿಬಿಟ್ಟಿವೆ. ಪರಂಪರಾಗರವಾದ ಪ್ರಾಚೀನ ಪದ್ಧತಿಗಳು ಮೂಲೆಗುಂಪಾಗುತ್ತಿವೆ. ಇಷ್ಟವಿಲ್ಲದಿದ್ದರೂ ಕಷ್ಟಪಟ್ಟಾದರೂ ಪಾಶ್ಚಿಮಾತ್ಯರನ್ನು ಕಣ್ಣುಮುಚ್ಚಿ ಅನುಕರಿಸುವುದೇ ನಮಗೆ ಆಧುನಿಕತೆಯೆನಿಸಿಬಿಟ್ಟಿದೆ. ಬಹುಶಃ ಇದೇ ಭಾರತೀಯರಿಗೆ ಬ್ರಿಟಿಷರು ಕೊಟ್ಟು ಹೋದ ಬ್ರಹ್ಮೋಪದೇಶ !
ಅಜ್ಜನ ಕಾಲದ ಅರ್ಥಹೀನ ಆಚರಣೆಗಳು, ಮೌಢ್ಯಗಳು ಎಂದು ನಮ್ಮ ನಂಬಿಕೆಗಳನ್ನು ಹೀಗಳೆಯುವ ನಮ್ಮವರದೇ ಸಂಖ್ಯೆ ಹೆಚ್ಚಾಗುತ್ತಿದೆ. ಅರ್ಥಗರ್ಭಿತವಾದ ನಮ್ಮ ಅನೂಚಾನ ಅನುಷ್ಠಾನಗಳನ್ನು ವಿಕೃತವಾಗಿ ಮತ್ತು ವಿಪರೀತವಾಗಿ ಪ್ರಶ್ನಿಸಿ ಮೂದಲಿಸುವುದು ಅವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಅವುಗಳೊಳಗಿನ ವೈಜ್ಞಾನಿಕ ಸತ್ತ್ವವನ್ನು ವಸ್ತುನಿಷ್ಠವಾಗಿ ವಿಮರ್ಶೆಮಾಡಿ ಒಪ್ಪಿಕೊಳ್ಳುವವರೂ ಕಡಿಮೆಯಾಗುತ್ತಿದ್ದಾರೆ.
ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಹೋಗುವಾಗಲೂ ಪ್ಯಾಂಟು, ಕೋಟುಗಳೇ ಹಿತನ್ನುವ ನಮ್ಮ ಹುಡುಗರಿಗೆ ಪಂಚೆ ಉಟ್ಟುಕೊಳ್ಳುವುದು ಹೇಗೆಂದೇ ಗೊತ್ತಿಲ್ಲ. ಅದು ನಮ್ಮತನದ ದ್ಯೋತಕ, ನಮ್ಮ ಹೆಮ್ಮೆಯ ದಿರಿಸು ಎನ್ನುವ ಅಭಿಮಾನವೂ ಅವರಲ್ಲಿಲ್ಲ, ಮತ್ತು ಅದನ್ನು ಉಟ್ಟುಕೊಂಡಾಗಿನ ಅನುಕೂಲ ಮತ್ತು ಆನಂದದ ಅನುಭವವೂ ಅವರಿಗೆ ಬೇಕಿಲ್ಲ!
ಬಿಸಿಲಿನ ಬೇಗೆಯ ವೈಪರೀತ್ಯದಲ್ಲಿಯೂ ನಮಗೆ ಧರಿಸಲು ಸೂಟುಬೂಟುಗಳೇ ಬೇಕು. ಬೆವರಿಳಿಸುವ ಸೆಖೆಯಿದ್ದರೂ, ನಮ್ಮ ಕಾಲುಗಳು ಸಾಕ್ಸಿನೊಳಗೆ ಸಿಲುಕಿ ಬೇಯುತ್ತಿರಬೇಕು! ಟೈಯನ್ನು ಗಂಟಲಿಗೆ ಬಿಗಿದು ಗಟ್ಟಿಯಾಗಿ ಗಂಟು ಹಾಕಬೇಕು. ಹುಟ್ಟು ಹಬ್ಬಕ್ಕೆ ಕೇಕು ಕತ್ತರಿಸಲೇ ಬೇಕು. ನ್ಯೂ ಇಯರ್ ಗೆ ವಿಶ್ ಮಾಡಲೇಬೇಕು. ಹೊಸ ಕಾರು, ಮನೆ, ಮದುವೆ ಅಷ್ಟೇ ಏಕೆ? ಹೊಸ ಮೊಬೈಲ್, ಬಟ್ಟೆ ಕೊಂಡರೂ ಸ್ನೇಹಿತರನ್ನು ಕರೆದು ’ಪಾರ್ಟಿ’ ಮಾಡಬೇಕು. ವಾರಕ್ಕೊಮ್ಮೆಯಾದರೂ ರೆಸ್ಟೋರೆಂಟ್ ನಲ್ಲಿ ಊಟಮಾಡಬೇಕು. ಮದುವೆಯೆಂದರೆ ರಿಸೆಪ್ಷನ್ ಇರಲೇಬೇಕು. ಖುಷಿಯಾಗಬೇಕಾದರೆ ಡಿನ್ನರ್ ಪಾರ್ಟಿಯೇ ಬೇಕು. ಡಿಜೆ ಜೊತೆಗಿನ ಕುಡಿತ, ಕುಣಿತವಿರಬೇಕು. ಮಕ್ಕಳು ಪ್ರೈವೇಟ್ ಶಾಲೆಗೇ ಹೋಗಬೇಕು. ಇಂಗ್ಲೀಷ್ ಕಲಿಯಲೇಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದರಷ್ಟೇ ಬದುಕು ಧನ್ಯ ………. ಇಂತಹ ಅದೆಷ್ಟೋ ವಿಷಯಗಳನ್ನು ನಾವು ಪ್ರಶ್ನಾತೀತವಾಗಿ ಒಪ್ಪಿಕೊಂಡು ಬಿಟ್ಟಿದ್ದೇವೆ ಮತ್ತು ನಮಗೆ ಇಂಥವುಗಳಾವುವೂ ಮೌಢ್ಯಗಳೆಂದು ಅನ್ನಿಸುವುದೇ ಇಲ್ಲ !
ನಮ್ಮ ದೇಹಕ್ಕೆ, ದೇಶಕ್ಕೆ ಮತ್ತು ನಾವಿರುವ ವಾತಾವರಣಕ್ಕೆ ಒಂದಿನಿತೂ ಹೊಂದಿಕೊಳ್ಳದ ಇಂಥಹ ಅದೆಷ್ಟೋ ವ್ಯವಸ್ಥೆಗಳಿಗೆ ನಮ್ಮನ್ನು ನಾವು ಸಮರ್ಪಿಸಿಕೊಂಡಿದ್ದೇವೆ. ಇದಲ್ಲವೇ ಅಂಧಾನುಕರಣೆ?
ಹಾಗೆಂದು ಹೇಳಿ ಸ್ವೇಚ್ಛೆಯಿಂದ ಅಥವಾ ಸಮಾಜದ ವ್ಯವಸ್ಥೆಗೆಗಿಂತ ವಿಭಿನ್ನವಾಗಿ, ಲೋಕವಿಲಕ್ಷಣವಾಗಿ ಬದುಕುವುದೂ ಸಮರ್ಥನೀಯವಲ್ಲ. ಪ್ರಾಯೋಗಿಕವೂ ಅಲ್ಲ. ಏಕೆಂದರೆ ಬದುಕಿನ ಪಾಠದಲ್ಲಿ ಇತರರಿಂದ ಕಲಿಯುವುದೂ ಬಹಳವಿರುತ್ತದೆ. ನಮಗೆ ಗೊತ್ತಿರುವುದಷ್ಟೇ ಸತ್ಯವಲ್ಲ. ನಮ್ಮ ಅನುಭವವೂ ಪರಿಪೂರ್ಣವಲ್ಲ.
ಹಾಗಾದರೆ ನಮಗೆ ಯಾರು ಮಾರ್ಗದರ್ಶಕರು ? ಯಾರು ಆದರ್ಶರು? ಯಾರನ್ನು ಅನುಸರಿಸಿ ಬದುಕಬೇಕು?
’ಯದ್ಯದಾಚರತಿ ಶ್ರೇಷ್ಠಃ ತತ್ತದೇವೇತರೋ ಜನಾಃ
ಸಾಮಾನ್ಯವಾಗಿ ಲೋಕದಲ್ಲಿ ಪ್ರಸಿದ್ಧರು, ಶ್ರೇಷ್ಠರು ಎಂದೆನಿಸಿಕೊಂಡವರನ್ನು ಬಹಳಮಂದಿ ಶ್ರದ್ಧೆಯಿಂದ ಅನುಕರಿಸುತ್ತಾರೆ. ಅವರ ನಡೆನುಡಿಗಳನ್ನು ಕಣ್ಣುಮುಚ್ಚಿ ಒಪ್ಪಿಕೊಂಡು ಬಿಡುತ್ತಾರೆ. ಕಾರಣ ಅವರು ದೊಡ್ಡವರು, ನಮಗಿಂತ ಹೆಚ್ಚು ತಿಳಿದವರು ಎಂಬ ನಂಬಿಕೆ.
ಆದರೆ ಹೆಚ್ಚಿನ ಕಡೆಗಳಲ್ಲಿ ಇಂಥಹ ನಂಬಿಕೆಗೂ ದ್ರೋಹವಾಗುತ್ತದೆ. ಜನರ ಮುಗ್ಧತೆಗೂ ಮೋಸವೆಗುವವರಿದ್ದಾರೆ. ವಿದ್ಯಾವಂತರ, ಮಹಾನ್ ಸಾಧಕರ ಸೋಗಿನಲ್ಲಿ ಜನಸಾಮಾನ್ಯರನ್ನು ವಂಚಿಸುವವರೂ ಬಹಳಮಂದಿ ಇದ್ದಾರೆ.
ಕೇವಲ ಜಾಹೀರಾತುಗಳಿಂದಲೇ ಕೆಲವರು ಜನಾನುರಾಗಿಗಳಾಗಿ ಬಿಡುತ್ತಾರೆ. ಕೆಲವರು ಒಳ್ಳೆಯ ಮಾತುಗಾರರಾಗಿರುತ್ತಾರೆ. ಕೆಲವರು ಹಾಡು, ನಟನೆ, ನೃತ್ಯ ಇತ್ಯಾದಿ ಕಲೆಗಳಿಂದ ಗಮನಸೆಳೆದರೆ ಮತ್ತು ಕೆಲವರು ದೈವದತ್ತವಾದ ರೂಪ ಲಾವಣ್ಯಗಳಿಂದ. ಇವರೆಲ್ಲರೂ ಸಲೀಸಾಗಿ ಜನರ ಮನಸ್ಸು ಗೆಲ್ಲುತಾರೆ. ಜನಪ್ರಿಯತೆಯನ್ನು ಗಳಿಸುತ್ತಾರೆ.
ಆದರೆ ಇವರು ಕೇವಲ ಮನೋರಂಜಕರಷ್ಟೇ. ಬದುಕಿನ ಆಳ ಅಗಲವನ್ನು ಅರಿತವರಲ್ಲ. ಮನಸ್ಸನ್ನು ತಣಿಸಬಲ್ಲವರಷ್ಟೇ. ಇವರಿಂದ ಸಿಗುವ ಸಮಾಧಾನವೇನಿದ್ದರೂ ತಾತ್ಕಾಲಿಕ. ಒಂದಷ್ಟು ಹೊತ್ತು ಕೇಳುಗನನ್ನು, ನೋಡುಗನನ್ನು ಭ್ರಮಾಲೋಕದಲ್ಲಿ ಸುತ್ತಾಡಿಸಿ ಬಿಡುತ್ತಾರೆ. ಅಷ್ಟೂ ಹೊತ್ತು ತನ್ನ ದುಃಖವನ್ನು ಮರೆತು ತಲ್ಲೀನನಾಗಿ ಮೈಮರೆತ ಪ್ರೇಕ್ಷಕ ಮತ್ತೆ ತನ್ನ ಮನೆಗೆ ತಾನೇ ಹೋಗಬೇಕು?
ಇಂಥಹ ಆಕರ್ಷಣೆಗಳು ಮನಸ್ಸನ್ನು ತಟ್ಟುತ್ತದೆ. ಹೃದಯವನ್ನು ಮುಟ್ಟುವುದಿಲ್ಲ. ಬಹಳ ಬೇಗ ಪ್ರಸಿದ್ಧಿಗೆ ಬರುವಂಥದ್ದು ಬಹುಕಾಲ ಉಳಿಯುವುದಿಲ್ಲ. ರಾತ್ರೋರಾತ್ರಿ ವೈರಲ್ ಆಗಿಬಿಡುವ ಈಗಿನ ಕಾಲದ ಸಿನೆಮಾ ಹಾಡುಗಳಂತೆ. ಒಂದಷ್ಟು ದಿನ ಎಲ್ಲರೂ ಅದನ್ನೇ ಗುನುಗುತ್ತಿರುತ್ತಾರೆ. ಸ್ವಲ್ಪ ಸಮಯ ಕಳೆದ ಬಳಿಕ ಅದು ಯಾರಿಗೂ ನೆನಪಿರುವುದಿಲ್ಲ.
ಅರ್ಥಪೂರ್ಣವಾದ ಸಾಹಿತ್ಯಗರ್ಭಿತವಾದ ಪದ್ಯಗಳು ಹೃದಯದಲ್ಲಿ ಚಿರಕಾಲ ಉಳಿದು ಬಿಡುತ್ತವೆ. ಅನುಭಾವದ ಉದ್ಗಾರವಾಗಿ ಹೊರ ಹೊಮ್ಮಿದ ದಾಸರ ಪದಗಳಂತೆ. ಎಂದೆಂದಿಗೂ ಪ್ರಸ್ತುತ ಮತ್ತು ಅಜರಾಮರ.
ವಿಚಿತ್ರವೆಂದರೆ, ಕ್ಷಣಿಕ ವಿಷಯಗಳಕಡೆಗೇ ಜನಾಕರ್ಷಣೆ ಹೆಚ್ಚು. ಸಿನಿಮಾ ಹಾಡುಗಳ ಮನರಂಜನೆ ಕಾರ್ಯಕ್ರಮದಲ್ಲಿ ಕಾಣುವ ಜನ ಸ್ತೋಮ ಭಕ್ತಿಸಂಗೀತದ ಕಚೇರಿಯಲ್ಲಿ ಕಾಣಿಸುವುದಿಲ್ಲ. ಮೋಹಕ ಮಾತು, ಹಾಡು ಕುಣಿತಗಳ ಜೊತೆ ಜನರನ್ನು ಸೆಳೆಯುವ ಸ್ವಯಂಘೋಷಿತ ಗುರುಗಳ ಸುತ್ತಲಿರುವ ಜನಸಂಖ್ಯೆ, ನಿಜವಾದ ವಿದ್ಯಾವಂತ ಪರಂಪರಾಗತ ತಪಸ್ವಿಗಳ ಬಳಿ ಕಾಣಸಿಗುವುದಿಲ್ಲ.
ಅಂಥವರದೆಷ್ಟೋ ಮಂದಿ ಬರುತ್ತಾರೆ. ಒಂದಷ್ಟುಕಾಲ ಹಾರಾಡಿ ಹೊರಟು ಹೋಗುತ್ತಾರೆ. ಹೊಸತು ಕಂಡಾಗ ಜನರೂ ಮುಗಿಬೀಳುತ್ತಾರೆ. ಸಿಹಿಯನ್ನು ಕಂಡ ಕೂಡಲೇ ಬಂದು ಮುತ್ತಿಕೊಳ್ಳುವ ನೊಣಗಳ ಹಾಗೆ.
ಆದರೆ ಪ್ರಜ್ಞಾವಂತರು ಹಾಗೆ ಸುಮ್ಮನೆ ಒಪ್ಪಿಕೊಳ್ಳುವುದಿಲ್ಲ. ವಿಮರ್ಶೆಮಾಡುತ್ತಾರೆ. ಭ್ರಮರಗಳು ಹೂವಿನ ಮಕರಂದವನ್ನಷ್ಟೇ ಅರಸಿಕೊಂಡು ಹೋಗುತ್ತವೆ. ಸಕ್ಕರೆಗೆ ಮುಗಿಬೀಳುವುದಿಲ್ಲ.
ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವವರೋ, ಚೆನ್ನಾಗಿ ಮಾತಾಡುವವರೋ ನಮಗೆ ಆದರ್ಶರಲ್ಲ. ಅನುಕರಣೆಗೆ ವಿದ್ಯೆ ಮತ್ತು ಸದ್ಗುಣಗಳಷ್ಟೇ ಮಾನ ದಂಡವಾಗಬೇಕು ಹೊರತು ತಾತ್ಕಾಲಿಕ ಆಕರ್ಷಣೆಗಳಲ್ಲ.
ಈಗಿನ ಕಾಲದಲ್ಲಿ ಒಳ್ಳೆಯವರನ್ನು, ಸಾತ್ವಿಕ ಆದರ್ಶಪುರುಷರನ್ನು ಗುರುತಿಸುವುದೂ ಕಷ್ಟ. ಅದ್ದರಿಂದ ಎಲ್ಲ ಸಾಧಕರನ್ನು, ಮಹನೀಯರನ್ನು ಗೌರವಿಸೋಣ. ಅವರ ಸಲಹೆಗಳನ್ನು ಸ್ವೀಕರಿಸೋಣ. ಆದರೆ ಆತ್ಮವಿಮರ್ಶೆ ಮಾಡಿಕೊಂಡು ಸಂಪೂರ್ಣವಾಗಿ ಒಪ್ಪಿಗೆಯಾದರೆ ಮಾತ್ರ ಅನುಸರಿಸೋಣ.
’ತಸ್ಮಾತ್ ಶಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯ ವ್ಯವಸ್ಥಿತೌ’ ಎಂದು ಭಗವಂತನೇ ಆಜ್ಞಾಪಿಸಿದಂತೆ ಶಾಸ್ತ್ರ ಗ್ರಂಥಗಳಷ್ಟೇ ನಮಗೆ ಪರಮ ಪ್ರಮಾಣವಾಗಿರಲಿ. ಅನುಕರಣೀಯವಾಗಿರಲಿ. ಶಾಸ್ತ್ರ ವಿರುದ್ಧವಾದ ಆಕರ್ಷಣೆಗಳು ನಮ್ಮನ್ನು ದಾರಿ ತಪ್ಪಿಸದಿರಲಿ ಎಂದು ಭಗವಂತನನ್ನೇ ಬೇಡಿಕೊಳ್ಳೋಣ.
~ ಶ್ರೀ ಯೋಗೀಂದ್ರ ಭಟ್, ಉಳಿ.
ಶ್ರೀ ಕೃಷ್ಣವೃಂದಾವನ, ನ್ಯೂಜೆರ್ಸಿ.