ಅಸಮಾನರಲ್ಲಿ ಜಗಳವೂ ಬೇಡ
ಕೆಲವರಿದ್ದಾರೆ ಲೋಕದಲ್ಲಿ. ನಮ್ಮನ್ನು ನಮ್ಮ ಪಾಡಿಗೆ ಸುಮ್ಮನಿರಲೂ ಬಿಡುವುದಿಲ್ಲ. ಏನೇನೋ ಕಿರುಕುಳಗಳನ್ನು ಸೃಷ್ಟಿಸಿ ನಮ್ಮನ್ನು ಕೆಣಕುತ್ತಾರೆ. ಸಿಟ್ಟುಗೊಳ್ಳುವಂತೆ ಮಾಡುತ್ತಾರೆ. ತಾಳ್ಮೆ ತಪ್ಪಿಸುತ್ತಾರೆ.
ಯೋಚಿಸದೆ ಪ್ರತಿಕ್ರಿಯಿಸಲು ಹೊರಟರೆ ನಮ್ಮಿಂದಲೂ ತಪ್ಪು ನಡೆದುಬಿಡುತ್ತದೆ. ಆಗ ಕೆಣಕಿದವನನ್ನು ಹೊಣೆಗಾರನನ್ನಾಗಿ ಮಾಡುವಂತಿಲ್ಲ.
ಕೆರಳಿಸಿದವನು ಕ್ಷುಲ್ಲಕನಾಗಿದ್ದಾಗ ಪ್ರತಿಕ್ರಿಯಿಸಿದವನದ್ದೇ ತಪ್ಪು ಎನ್ನುತ್ತಾರೆ. ಅವನೇನೋ ಮೂರ್ಖ, ನಿನ್ನ ಬುದ್ಧಿಗೇನಾಗಿತ್ತು ? ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ.
ರಸ್ತೆ ಅಪಘಾತದಲ್ಲಿ ಹಿಂದಿನಿಂದ ಗುದ್ದಿದವನದ್ದೇ ತಪ್ಪು. ಇದ್ದಕ್ಕಿದ್ದಂತೆ ಗಾಡಿಯನ್ನು ನಿಲ್ಲಿಸಿದ್ದು ಎದುರಿನವನು, ತಪ್ಪು ಅವನದ್ದೇ ಎನ್ನುವಂತಿಲ್ಲ. ಸಾಕಷ್ಟು ಅಂತರವನ್ನು ಕಾಯ್ದು ಕೊಳ್ಳುವುದು, ಸದಾ ಜಾಗ್ರತನಾಗಿರುವುದು, ವೇಗದ ಮಿತಿಯಲ್ಲಿರುವುದು, ವಾಹನವನ್ನು ನಿಲ್ಲಿಸಲು ಸರ್ವದಾ ಸಿದ್ಧನಾಗಿರುವುದು ಇತ್ಯಾದಿ ನಿಯಮಗಳಿಗೆ ಚಾಲಕನೇ ಹೊಣೆಯಾಗಿರುವುದರಿಂದ.
ಕೆರಳಿಸುವ ಪ್ರಸಂಗಗಳು ಬದುಕಿನಲ್ಲಿ ಬಹಳಷ್ಟು ಬರುತ್ತವೆ. ಇದು ಜೀವನದ ಪರೀಕ್ಷೆ. ತತ್ ಕ್ಷಣಕ್ಕೆ ತಪ್ಪಾಗಿ ಪ್ರತಿಕ್ರಿಯಿಸದಂತೆ ವಿವೇಚನೆ ನಮ್ಮನ್ನು ಸದಾ ಎಚ್ಚರದಲ್ಲಿಡಬೇಕು.
ಬಹಳಷ್ಟು ಎಡವಟ್ಟುಗಳಿಗೆ ಕೆಣಕಿದವನು ನಿಮಿತ್ತ ಕಾರಣನಾದರೆ, ಮುಖ್ಯಕಾರಣ ನಮ್ಮ ಮೂರ್ಖತನ.
ಸಿಟ್ಟು, ಅಸಹನೆ ನಮ್ಮ ಮನಸ್ಸಿನ ದೌರ್ಬಲ್ಯ. ಅದರ ನಿರ್ಮೂಲನೆ ಸಾಧ್ಯವಿಲ್ಲ. ಆದರೆ ಅವುಗಳನ್ನು ನಿಯಂತ್ರಿಸಲು ಬರುತ್ತದೆ.
ಅಲ್ಪರ ಕ್ರಿಯೆಗೆ ಪ್ರತಿಕ್ರಿಯಿಸಲು ಹೋದರೆ ನಾವೂ ಅಲ್ಪರಾಗಿಬಿಡುತ್ತೇವೆ.
ಕಾಡಿನರಾಜ ಸಿಂಹವು ತನಗೆ ಕಿರುಕುಳ ಕೊಟ್ಟರೂ ತನಗಿಂತ ಕ್ಷುಲ್ಲಕ ಪ್ರಾಣಿಗಳ ಜೊತೆಗೆ ಜಗಳಕ್ಕೆ ನಿಲ್ಲುವುದಿಲ್ಲವಂತೆ. ಎಷ್ಟು ಕೆಣಕಿದರೂ ಸುಮ್ಮನೆ ಬೆನ್ನುಹಾಕಿ ತನ್ನ ಪಾಡಿಗೆ ತಾನು ಹೋಗುತ್ತದಂತೆ.
ಅಸಮಾನೇ ಸಮಾನತ್ವಂ ಭವಿತಾ ಕಲಹೇ ಮಮ|
ಇತಿ ಮತ್ವಾ ಧ್ರುವಂ ಮಾನೀ ಮೃಗಾತ್ ಸಿಂಹಃ ಪಲಾಯತೇ
ಅದು ಸಿಂಹದ ಸೋಲಲ್ಲ. ಕ್ಷುಲ್ಲಕ ಪ್ರಾಣಿಯನ್ನು ಸೋಲಿಸುವುದೂ ದೊಡ್ಡ ಸಂಗತಿಯಲ್ಲ. ಆದರೂ ಸಿಂಹ ಪ್ರತಿಕ್ರಿಯಿಸುವುದಿಲ್ಲ.
ಏಕೆಂದರೆ, ಕೇವಲ ಎದುರಾಳಿಯನ್ನು ಸೋಲಿಸುವುದಷ್ಟೇ ಗೆಲುವಲ್ಲ! ಸ್ಪರ್ಧೆ ಎಂಥವರ ಜೊತೆಗೆ ಎನ್ನುವುದೇ ನಿರ್ಣಾಯಕ !
~ ಶ್ರೀ ಯೋಗೀಂದ್ರ ಭಟ್, ಉಳಿ.
ಶ್ರೀ ಕೃಷ್ಣವೃಂದಾವನ, ನ್ಯೂಜೆರ್ಸಿ.