ಹಳೆಯ ಹೊಳೆಗಳಿಳೆಯ ನೆಲದಿ
ತಳೆದು ಹೊಸತನವನು ಭರದಿ
ತೊಳೆದು ಕೊಳೆಯ ಹರಿದು ಶರಧಿ-
-ಯೊಳಗೆ ಕೊನೆಯಲಳಿಯದು ನದಿ
ಇಳೆಯ ಹಸಿರ ಸಿರಿಯು ಚಿಗುರಿ
ಸೆಳೆದು ಮನವ ನವತೆ ನಿಗುರಿ
ಬೆಳೆದ ತರುವು ಬದುಕಿನ ಸಿರಿ-
-ಯುಳಿಯುತಿರಲು ಸತತವು ಸರಿ
ಗೆಳೆತನವಿರೆ ಬದುಕು ಸುಖವು
ಹಳೆಯ ಸವಿಯ ನೆನಪು ಹಿತವು
ಬೆಳೆವ ಗೆಳೆತನದಲಿ ಮಮತೆ
ಬೆಳೆದುಳಿಯುವ ಸತತ ನವತೆ
ಎಳೆಯ ಮಗುವು ಬುವಿಯಲಿಳಿದು
ತಳೆದು ಹುರುಪು ಕಲಿತು ನಡೆದು
ತೊಳೆಯೆ ಮನವ ಹೊಸತನರಿತು
ಬೆಳೆಯುತರಿತು ದಿನವು ಹೊಸತು
ಬೆಳೆವ ಹುರುಪು ಕವಿಗೆ ಸತತ
ಹೊಳೆದು ಮನಕೆ ಬರೆಹ ನಿರತ
ಹೊಳೆಯ ಕವನ ಹರಿದವಿರತ-
-ವಳಿಯದಿರುತಲರಳಲಮಿತ
– ಎ. ಕೇಶವರಾಜ್ 🙏
July 02 2021