ಮನದ ಕೊಳೆಯನ್ನು ತೊಳೆಯುವುದು ಸತ್ಯ

ಬಹುಶಃ ಮನುಷ್ಯನಿಗೆ ಜೀವನವಿಡೀ ಕಾಡುವ ದೊಡ್ಡ ಸವಾಲಿನ ಕೆಲಸವೆಂದರೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು !

ಎಷ್ಟು ಸಲ ಸ್ನಾನಮಾಡಿದರೂ ಈ ದೇಹ ಮತ್ತೆ ಮೈಲಿಗೆಯಾಗುತ್ತದೆ. ಮೇಜು, ಕುರ್ಚಿ, ಕಿಟಕಿ, ನೆಲ, ಬಾಗಿಲು, ಪಾತ್ರೆ ವಸ್ತುಗಳನ್ನು ಅದೆಷ್ಟು ಬಾರಿ ತೊಳೆದು ಒರಸಿ ಸ್ವಚ್ಚಗೊಳಿಸಿದರೂ ಮತ್ತೆ ಕೊಳೆ ಕಾಣಿಸಿಕೊಳ್ಳುತ್ತದೆ. ಕೈ, ಕಾಲು, ಮುಖ, ಮೈ, ತಟ್ಟೆ, ಲೋಟೆ, ನೆಲ ಇತ್ಯಾದಿಗಳನ್ನು ತೊಳೆಯುವುದರಲ್ಲೇ ಅಮೂಲ್ಯ ಜೀವನದ ಅದೆಷ್ಟೋ ಸಮಯ ಕಳೆದುಹೋಗುತ್ತದೆ. ಲೆಕ್ಕಹಾಕಿದರೆ ವರ್ಷಗಳೇ ಆಗುತ್ತವೆ!

ಅದರಲ್ಲೂ ಇಂತಹ ಕೆಲಸಗಳಿಗೋಸ್ಕರ ನಮ್ಮವರು ನಮಗಾಗಿ ವ್ಯಯಿಸಿರುವ ಸಮಯವೆಷ್ಟು ಎಂಬುವುದನ್ನು ಯೋಚಿಸಿದರೆ ನಮ್ಮ ಮೇಲಿರುವ ಋಣದ ಹೊರೆಯ ಅರಿವಾಗುತ್ತದೆ.

ನಾವು ಮಗುವಾಗಿದ್ದಾಗ ಮತ್ತೆ ಮತ್ತೆ ಮಾಡುವ ಮಲಮೂತ್ರಗಳನ್ನು ಹೇಸಿಗೆ ಪಟ್ಟುಕೊಳ್ಳದೆ ತೊಳೆದು ಕೇವಲ ಪ್ರೀತಿಯಿಂದ ನಮ್ಮನ್ನು ಬೆಳೆಸಿದ ಅಮ್ಮನ ಋಣವನ್ನು ನಮ್ಮಿಂದ ತೀರಿಸಲು ಸಾಧ್ಯವೇ? ಮತ್ತದೇ ಬೇಳೆ ತರಕಾರಿಗಳನ್ನು ಬೇಯಿಸಿ, ಬಗೆಬಗೆಯ ಭಕ್ಷ್ಯಭೋಜ್ಯಗಳನ್ನು ಬೇಸರಿಸಿಕೊಳ್ಳದೇ ತಯಾರಿಸಿ, ಹೊಟ್ಟೆ ತುಂಬಾ ರುಚಿಕಟ್ಟಾದ ಊಟವನ್ನು ಉಣ್ಣಿಸಿ, ನಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳುವ ಮನೆಯೊಡತಿಯ ಋಣವೂ ಹಾಗೆಯೇ ಅಲ್ಲವೇ ? ಅನುದಿನವೂ ಅವಳು ಅದೆಷ್ಟು ಬಾರಿ ಆಕೆ ಅದೇ ಒಲೆ, ಪಾತ್ರೆ, ವಸ್ತ್ರಗಳನ್ನು ನಮಗೋಸ್ಕರ ಒಗೆದು ಒರಸಿ ಸ್ವಚ್ಛವಾಗಿಡಲು ಶ್ರಮಿಸುತ್ತಾಳೆ ?

ಸ್ವಚ್ಚತೆಯ ವಿಷಯದಲ್ಲಿ ನಿಜವಾಗಿಯೂ ನಾವು ಪರಾವಲಂಬಿಗಳು. ಮೊದಲು ಮಗುವಾಗಿದ್ದಾಗ ನಮ್ಮ ಮೈತೊಳೆದು ಶುದ್ಧಗೊಳಿಸಿದವಳು ಅಮ್ಮನಾದರೆ ಕೊನೆಯ ಬಾರಿಗೆ ನಮ್ಮ ಮೃತ ದೇಹಕ್ಕೆ ಸ್ನಾನಮಾಡಿಸುವವರು ಮಕ್ಕಳು !

ಪ್ರಕೃತಿ, ಪಂಚಭೂತಗಳು, ಗುರುಗಳು, ಬಂಧುಗಳು, ಪರಿಚಾರಕರು. ಮತ್ತು ಇವರೆಲ್ಲರನ್ನೂ ನಮಗೆ ಅಗತ್ಯಕ್ಕೆ ಅನುಗುಣವಾಗಿ ಸಹಾಯಕ್ಕೆ ಒದಗುವಂತೆ ಅನುಗ್ರಹಿಸಿದ ದೇವರು. ಇವರೆಲ್ಲರೂ ನಮ್ಮ ಅಂತರಂಗ ಮತ್ತು ಬಹಿರಂಗವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟವರು !

ಅದ್ಭಿಃ ಶುಧ್ಯಂತಿ ಗಾತ್ರಾಣಿ ಬುದ್ಧಿರ್ಜ್ಞಾನೇನ ಶುಧ್ಯತಿ | ಅಹಿಂಸಯಾ ಚ ಭೂತಾತ್ಮಾ ಮನಃ ಸತ್ಯೇನ ಶುಧ್ಯತಿ |

ದೇವರು ನಿರ್ಮಿಸಿದ ಪ್ರಕೃತಿಯಲ್ಲಿ ದೊರೆಯುವ ಶುದ್ಧ ನೀರು ನಮ್ಮ ದೇಹವನ್ನು ತೊಳೆದು ಕೊಳೆಯನ್ನು ಕಳೆಯುತ್ತದೆ. ಗುರು ಹಿರಿಯರ ಮುಖೇನ ಪ್ರಾಪ್ತವಾದ ಒಳ್ಳೆಯ ವಿಚಾರಗಳು ಅಂತರಂಗದ ಒಳಗೆ ಸೇರಿದಾಗ ಅಜ್ಞಾನ ಅಹಂಕಾರ ಅಪಾರ್ಥಗಳು ದೂರವಾಗುತ್ತವೆ. ಅರಿವಿನ ಪರಿಪಕ್ವತೆಯಿಂದ ಬುದ್ಧಿಯ ಶುದ್ಧಿಯಾಗುತ್ತದೆ.

ಯಾರಿಗೂ ಒಂದಿನಿತೂ ತೊಂದರೆಯಾಗದಂತೆ ಬದುಕಿದವನ ಪರೋಪಕಾರದ ಬಾಳು ಸಾರ್ಥಕ ಬದುಕಿನ ಪರಿಶುದ್ಧತೆಯನ್ನು ಪ್ರತಿನಿಧಿಸುತ್ತದೆ.

ನಾನೇ ಎಲ್ಲ ನನ್ನಿಂದಲೇ ಎಲ್ಲ ಎಂದು ಮೆರೆಯುವಾಗ, ಎಲ್ಲದಕ್ಕೂ ಮುಖ್ಯ ಕಾರಣವಾದ ಇತರರೆಲ್ಲರ ಸಹಕಾರವೆಂಬ ಸತ್ಯವನ್ನು ಅಹಂಕಾರವೆಂಬ ಸುಳ್ಳು ಮರೆಮಾಡಿಬಿಡುತ್ತದೆ. ನಮ್ಮವರು ನಮಗೋಸ್ಕರ ಸಲ್ಲಿಸಿದ ಸಮಯವನ್ನು, ತ್ಯಾಗವನ್ನು ಮನಸಾರೆ ಸ್ಮರಿಸಿಕೊಂಡಾಗ ಅಹಂಭಾವ ಕಳಚಿಕೊಳ್ಳುತ್ತದೆ.

ನಾನು ನಾನೆಂಬ ಸುಳ್ಳಿನ ಆವರಣದಿಂದ ಆವೃತವಾಗಿರುವ ಪರಾವಲಂಬನೆಯೆಂಬ ಸತ್ಯವನ್ನು ಹೊರಗೆಳೆದು ತಂದು ಒಪ್ಪಿಕೊಂಡಾಗ ಮನಸ್ಸಿನ ಶುದ್ಧಿಯಾಗುತ್ತದೆ. ಅಜ್ಞಾನ ಅಹಂಕಾರವೆಂಬ ಸುಳ್ಳಿನ ಮೋಡ ಮರೆಯಾದಾಗ ಸತ್ಯವೆಂಬ ಸೂರ್ಯನ ಬೆಳಕು ನಮ್ಮೆಲ್ಲರ ಮನಸ್ಸುಗಳನ್ನು ಅರಳಿಸುತ್ತದೆ. ಮತ್ತೆ ಅದೇ ಬೆಳಕಿನಿಂದ ನಮ್ಮ ಮನೆಯೂ ಬೆಳಗುತ್ತದೆ. ನಂದಗೋಕುಲವಾಗುತ್ತದೆ.

~ ಶ್ರೀ ಯೋಗೀಂದ್ರ ಭಟ್, ಉಳಿ.
ಶ್ರೀ ಕೃಷ್ಣವೃಂದಾವನ, ನ್ಯೂಜೆರ್ಸಿ.

(’ದರ್ಪಣ’ ಮಾಸಿಕದಲ್ಲಿ ಈ ಸಲದ ಅಂಕಣ )